ಯೋಗಾಸನಗಳು -
ಪತಂಜಲಿ ಮಹರ್ಷಿ ನಿರೂಪಿಸಿರುವ ಯೋಗಾಶಾಸ್ತ್ರದಲ್ಲಿ ಹೇಳಿದ ಅಷ್ಟಾಂಗಗಳಲ್ಲಿ ಆಸನ ಮೂರನೆಯ ಅಂಗ. ಆಸನಗಳು ಯೋಗಾಶಾಸ್ತ್ರದಲ್ಲಿ ನಿರೂಪಿಸಲ್ಪಟ್ಟ ಚಿತ್ತೈಕಾಗ್ರತೆಯ ಮೂಲಕ ಸಮಾಧಿ ಅವಸ್ಥೆಗೆ ಸಾಧನವಾದುದರಿಂದ ಅಷ್ಟಾಂಗಗಳಲ್ಲಿ ಆಸನವನ್ನೂ ಸೇರಿಸಿರುತ್ತಾರೆ. ಕೆಲವು ಉಪನಿಷತ್ತುಗಳು, ಅಷ್ಟಾಂಗ ಯೋಗದಲ್ಲಿ ನಿಷ್ಣಾತರಾದ ಯೋಗಿಗಳು ಮತ್ತು ಅನುಭವಿಗಳೂ ಆಸನ ಪ್ರಕರಣವನ್ನೇ ಮೊದಲ ಅಂಗವನ್ನಾಗಿ ಧ್ಯಾನ ಮತ್ತು ಧಾರಣಗಳಾದ ಆರು ಮತ್ತು ಏಳನೆಯ ಅಂಗಗಳಲ್ಲಿ ಅಂತರ್ಭಾವ ಮಾಡಿ ಸಮಾಧಿ ಅವಸ್ಥೆಗೆ ಬರಲು ಆರು ಅಂಗಗಳೇ ಸಾಕೆಂದು ನಿರೂಪಿಸುತ್ತಾರೆ. ಹಠಯೋಗ ಪ್ರದೀಪಿಕಾಕಾರರಾದ ಸ್ವಾತ್ಮಾರಾಮಯೋಗಿಯವರ ರೀತ್ಯಾ ಚಿತ್ತೈಕಾಗ್ರತೆಗೆ ಮೂಲಭೂತವಾದ ಶರೀರ, ಇಂದ್ರಿಯಾದಿಗಳು ರೋಗಗ್ರಸ್ತವಾದಲ್ಲಿ ಅಥವಾ ದುರ್ಬಲವಾದಲ್ಲಿ ಸಮಾಧಿ ಅವಸ್ಥೆಗೆ ಬರಲು ಸಾಧ್ಯವಾಗಲಾರದು. ಆದ್ದರಿಂದ ಶರೀರದಲ್ಲಿ ಆರೋಗ್ಯ ಮತ್ತು ಅಂಗಲಾಘವಾದಿಗಳಿದ್ದರೆ ಚಿತ್ತವನ್ನು ಏಕಾಗ್ರತೆಗೆ ತರಲು ಸಾಧ್ಯವಾಗುವುದು. ಆರೋಗ್ಯ ಮತ್ತು ಅಂಗಲಾಘವಾದಿಗಳು ಉಂಟಾಗಬೇಕಾದರೆ ಆಸನಗಳು ಅತಿಮುಖ್ಯ. ಸಾಧಕ ರೋಗಗ್ರಸ್ತನಾದಲ್ಲಿ ಯೋಗಾಂಗಗಳನ್ನು ಸಾಧಿಸಲಾರ. ಆದಕಾರಣ ಆಸನವನ್ನೇ ಮೊದಲನೆಯ ಅಂಗವನ್ನಾಗಿ ವಿವರಿಸುತ್ತಾರೆ. ಪಂಚಕೋಶಗಳು ಶುದ್ಧಿಯಾಗದೆ ಚಿತ್ತೈಕಾಗ್ರತೆ ಸಂಭವಿಸಲಾರದು. ಪಂಚಕೋಶಗಳ ಪೈಕಿ ಅನ್ನಮಯ, ಪ್ರಾಣಮಯ, ಮನೋಮಯ, ಈ ಮೂರು ಕೋಶಗಳು ಆಸನ ಮತ್ತು ಪ್ರಾಣಾಯಾಮಗಳಿಲ್ಲದೇ ಶುದ್ಧಿಯಾಗಲಾರವು. ಆದಕಾರಣ ಆಸನಾದಿಗಳನ್ನು ಮೊದಲನೆಯ ಅಂಗವನ್ನಾಗಿ ಪರಿಗಣಿಸಿರುವುದು ಸೂಕ್ತವಾಗಿ ತೋರುತ್ತದೆ. ಆಸನಗಳು ಮಾನವ ಸಾಮಾನ್ಯರಿಗೂ ಅತಿಮುಖ್ಯ.

	ಆಸನಗಳ ವಿವರಣೆ : ಸಾಮಾನ್ಯವಾಗಿ ಆಸನಗಳು ಸ್ಥಾವರ ಜಂಗಮಾತ್ಮಕವಾದ ಪ್ರಪಂಚದಲ್ಲಿ ಎಷ್ಟು ಜೀವರಾಶಿಗಳನ್ನು ಸೃಷ್ಟಿಸಿರುತ್ತಾರೋ ಅಷ್ಟು ಆಸನಗಳಿವೆ ಎಂದು ಶಾಸ್ತ್ರಗಳಿಂದ ತಿಳಿದುಬರುತ್ತದೆ. ಆದರೆ ಅಷ್ಟು ಆಸನಗಳ ವಿವರಣೆ ಯಾವ ಯೋಗಶಾಸ್ತ್ರದ ಗ್ರಂಥಗಳಿಂದಲೂ ತಿಳಿದುಬಂದಿಲ್ಲ. ಪಾತಂಜಲಯೋಗ ಸೂತ್ರ, ಹಠಯೋಗ ಪ್ರದೀಪಿಕಾ, ಘೇರಂಥ ಸಂಹಿತಾ, ಸೂತಸಂಹಿತಾ, ಯೋಗವಾಸಿಷ್ಠ, ಯೋಗಯಾಜ್ಞವಲ್ಕ್ಯ, ದೇವೀಭಾಗವತ, ಯೋಗತಾರಾವಳಿ ಮೊದಲಾದ ಕೃತಿಗಳಲ್ಲಿ ಕೆಲವೇ ಆಸನಗಳನ್ನು ಹೇಳಲಾಗಿದೆ. ವಿಶ್ವಾಮಿತ್ರ ವಸಿಷ್ಠ ಮೊದಲಾದ ಋಷಿಗಳು ಕೆಲವು ಆಸನಗಳನ್ನು ಕಂಡುಹಿಡಿದರೆಂದು ಕೆಲವು ಗ್ರಂಥಗಳಿಂದ ತಿಳಿದು ಬರುತ್ತದೆ. ಯೋಗಕುರಂಠದಲ್ಲಿ ಸಾಮಾನ್ಯವಾಗಿ ಸಾವಿರಾರು ಆಸನಗಳ ವಿವರಣೆಯಿರುವುದಾಗಿ ತಿಳಿದುಬರುತ್ತದೆ. ಇವುಗಳಲ್ಲಿ ಕೆಲವು ಆಸನಗಳನ್ನು ಚಿಕಿತ್ಸಾ ಭಾಗವನ್ನಾಗಿಯೂ ಕೆಲವು ಆಸನಗಳನ್ನು ಆಂತರಿಕವಾದ ಕೋಶಾದಿಗಳನ್ನು ಶುದ್ಧಿ ಪಡಿಸುವುದಕ್ಕೂ ಕೆಲವು ಆಸನಗಳನ್ನು ಸ್ಥಿರಭಾಗಗಳನ್ನಾಗಿಯೂ ವಿಂಗಡಿಸಿರುತ್ತಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಿಲಾಗಿದೆ.

  	ಆಸನಗಳನ್ನು ಅಭ್ಯಾಸಮಾಡಬೇಕಾದರೆ ಅದರ ಕ್ರಮ, ಆಸನಗಳ ವಿನ್ಯಾಸ ಕ್ರಮ, ರೇಚಕ ಮತ್ತು ಪೂರಕಗಳ ಕ್ರಮ ಮತ್ತು ಅವುಗಳ ಗತಿಗಳನ್ನು ಮೊದಲು ತಿಳಿಯಬೇಕು. ಅನಂತರ ಆಸನಗಳಿಂದಾಗುವ ಪ್ರಯೋಜನವನ್ನು ತಿಳಿಯಬೇಕು. ಯೋಗಶಾಸ್ತ್ರಕಾರರು ಹೇಳಿರುವಂತೆ ಶರೀರದ ಒಳಭಾಗದಲ್ಲಿ ಯಾವ ಪರಿಣಾಮವಾಗುವುದೆಂದು ತಿಳಿದು ಅಭ್ಯಾಸ ಮಾಡಬೇಕು. ಉದಾಹರಣೆಗೆ ಶಾಸ್ತ್ರಭಾಗದಲ್ಲಿ ಪಶ್ಚಿಮತಾನಾಸನದ ಕ್ರಮ ಹೀಗಿದೆ: ಕಾಲುಗಳನ್ನು ದಂಡಾಕಾರವಾಗಿ ನೀಡಿ, ಎರಡು ಕೈಗಳಿಂದಲೂ ನೀಡಿರುವ ಕಾಲುಗಳ ಹೆಬ್ಬೆರಳುಗಳನ್ನು ಹಿಡಿದು ಹಣೆಯನ್ನು ಮಂಡಿಗಳ ಮೇಲಿರಿಸಿ ಕುಳಿತಿರುವುದಕ್ಕೆ ಪಶ್ಚಿಮತಾನಾಸನವೆಂದು ಹೆಸರು. ಹೀಗೆ ಈ ಆಸನವನ್ನು ಅಭ್ಯಾಸಮಾಡಿದರೆ ಆರೋಗ್ಯಕ್ಕೆ ಬದಲಾಗಿ ಅನಾರೋಗ್ಯವೇ ಬಂದೀತು. ಅದಕ್ಕಾಗಿಯೇ ಈ ಆಸನಗಳ ಕ್ರಮಗಳನ್ನು ಯೋಗಶಾಸ್ತ್ರದ ಪೂರ್ಣ ತಿಳುವಳಿಕೆಯಿಂದಲೂ ಅನುಭವದಿಂದಲೂ ಗುರುವಿನ ಸಾನಿಧ್ಯದಿಂದಲೂ ಯೋಗಾಸನಗಳ ರಹಸ್ಯವನ್ನು ಅರಿತು ಅಭ್ಯಾಸಮಾಡಿದರೆ ಈ ಆಸನಕ್ಕೆ ಹೇಳಿರುವ ಫಲ ಖಂಡಿತ ದೊರೆಯುವುದು.

ಈ ಆಸನದಲ್ಲಿ ಹದಿನಾರು ವಿನ್ಯಾಸಗಳಿರುತ್ತವೆ; ಒಂಬತ್ತನೆಯ ವಿನ್ಯಾಸವೇ ಆಸನದ ಸ್ಥಿತಿ, ಆಸನದ ಸ್ಥಿತಿಗೆ ಬರಬೇಕಾದರೆ ಮೊದಲು ನೆಟ್ಟಗೆ ನಿಂತು, ಕಾಲುಗಳ ಹೆಬ್ಬೆರಳುಗಳನ್ನು ಜೋಡಿಸಿ ಉಸಿರನ್ನು ತೆಗೆದುಕೊಳ್ಳುತ್ತ, ಕೈಗಳನ್ನು ನೆಟ್ಟಗೆ ಮೇಲೆತ್ತಿ ಮುಗಿದು, ಎದೆಯನ್ನು ನೆಟ್ಟಗೆ ಮಾಡಿ, ತಲೆಯನ್ನು ಸ್ವಲ್ಪ ಹಿಂದೆಬಗ್ಗಿಸಿ, ಕೈಗಳ ತುದಿಯನ್ನು ನೋಡುತ್ತಿರುವುದು ಒಂದನೆಯ ವಿನ್ಯಾಸ. ನಿಧಾನವಾಗಿ ಉಸಿರನ್ನು ಬಿಡುತ್ತಾ ಬಗ್ಗಿ ಕಾಲು ಅಕ್ಕಪಕ್ಕಗಳಲ್ಲಿ ಕೈಗಳನ್ನು ನೆಲದ ಮೇಲೆ ಊರಿ, ಮಂಡಿಗಳನ್ನು ನೆಟ್ಟಗೆ ಮಾಡಿ, ಎರಡು ಮಂಡಿಗಳ ಮಧ್ಯಕ್ಕೆ ಮುಖವನ್ನಿಡುವುದು, ಎರಡನೆಯ ವಿನ್ಯಾಸ, ಉಸಿರನ್ನು ನಿಧಾನವಾಗಿ ತೆಗೆದುಕೊಳ್ಳುತ್ತ ತಲೆಯನ್ನು ಮೇಲೆತ್ತುವುದು ಮೂರನೆಯ ವಿನ್ಯಾಸ, ಕೈಗಳನ್ನು ಊರಿ ಕಾಲುಗಳನ್ನು ಹಿಂದಕ್ಕೆ ಬೀಸಿ ಒಗೆದು, ದಂಡಾಕಾರವಾಗಿ ಮಲಗಿ ಕೈಗಳು ಮತ್ತು ಪಾದಗಳಲ್ಲಿ ತನ್ನ ಶರೀರವನ್ನು ದಂಡಾಕಾರವಾಗಿ ಮಲಗಿ ಕೈಗಳು ಮತ್ತು ಪಾದಗಳಲ್ಲಿ ತನ್ನ ಶರೀರವನ್ನು ದಂಡಾಕಾರವಾಗಿ ಉಸಿರು ಬಿಡುತ್ತ ನಿಲ್ಲಿಸುವುದು ನಾಲ್ಕನೆಯ ವಿನ್ಯಾಸ. ಪಾದಗಳನ್ನು ಮುಂಬದಿಗೆ ಮಡಿಸಿ, ಶರೀರವನ್ನು ಮುಂದಕ್ಕೆ ತಳ್ಳಿ, ಸೊಂಟವನ್ನು ಮಡಿಸಿ, ಉಸಿರನ್ನು ತೆಗೆದುಕೊಳ್ಳುತ್ತ, ಎದೆಯನ್ನು ನೆಟ್ಟಗೆ ಮೇಲೆತ್ತಿ ತಲೆಯನ್ನು ಸ್ವಲ್ಪ ಹಿಂದಕ್ಕೆ ಬಗ್ಗಿಸಿ ನಿಲ್ಲುವುದು ಐದನೆಯ ವಿನ್ಯಾಸ. ಪಾದಗಳನ್ನು ಅರ್ಧ ಅಡಿಯಷ್ಟು ಅಗಲವಾಗಿರಿಸಿ, ಭೂಮಿಯ ಮೇಲೂರಿ, ಕೈಗಳ ಮಧ್ಯದಿಂದ ತಲೆಯನ್ನು ಒಳಕ್ಕೆ ತೆಗೆದುಕೊಂಡು ಸೊಂಟವನ್ನು ಮೇಲೆತ್ತಿ ಹೊಟ್ಟೆಯನ್ನು ಅಕ್ಕಳಿಸಿ ಉಸಿರನ್ನು ಬಿಡುತ್ತ ಹೊಕ್ಕುಳನ್ನು ನೋಡುತ್ತಿರುವುದು ಆರನೆಯ ವಿನ್ಯಾಸ, ಉಸಿರನ್ನು ತೆಗೆದುಕೊಳ್ಳುತ್ತ ಊರಿರುವ ಎರಡು ಕೈಗಳ ಮಧ್ಯಭಾಗದಿಂದ ಎರಡುಕಾಲುಗಳನ್ನು ನೆಗೆದು ತಂದು, ಭೂಮಿಯ ಮೇಲೊರಿಸಿ, ದಂಡಾಕಾರವಾಗಿ ನೀಡಿ, ಕುಳಿತು, ಎದೆಯನ್ನೂ ಸೊಂಟವನ್ನೂ ನೆಟ್ಟಗಿರಿಸಿ, ಸಾಧ್ಯವಾದಷ್ಟು ರೇಚಕ ಪೂರಕಗಳನ್ನು ಮಾಡುತ್ತಿರುವುದು ಏಳನೆಯ ವಿನ್ಯಾಸ. ದೀರ್ಘವಾಗಿ ಉಸಿರನ್ನು ತೆಗೆದುಕೊಂಡು ಉಸಿರನ್ನು ನಿಧಾನವಾಗಿ ಬಿಡುತ್ತ ನೀಡಿರುವ ಕಾಲುಗಳ ಪಾದಗಳನ್ನು ಎರಡು ಕೈಗಳಿಂದಲೂ ಹಿಡಿದು, ಎದೆ, ತಲೆಗಳನ್ನು ನೆಟ್ಟಗೆಮಾಡಿ ಕುಳಿತಿರುವ ಎಂಟನೆಯ ವಿನ್ಯಾಸ, ನಿಧಾನವಾಗಿ ಉಸಿರನ್ನು ಬಿಡುತ್ತ ನೆಟ್ಟಗೆ ಮಾಡಿರುವ ಮಂಡಿಗಳ ಮೇಲೆ ಹಣೆಯನ್ನಿರಿಸಿ ಸಾಧ್ಯವಾದಷ್ಟು ರೇಚಕ ಪೂರಕಗಳನ್ನು ನಿಧಾನವಾಗಿ, ದೀರ್ಘವಾಗಿ ಮಾಡುತ್ತಿರುವುದು ಒಂಭತ್ತನೆಯ ವಿನ್ಯಾಸ. ಇದೇ ಆಸನದ ಸ್ಥಿತಿ. ಉಸಿರನ್ನು ತೆಗೆದುಕೊಳ್ಳುತ್ತ ತಲೆಯನ್ನು ಮಾತ್ರ ಮೇಲೆತ್ತುವುದು ಹತ್ತನೆಯ ವಿನ್ಯಾಸ. ಅಲ್ಲಿಯೇ ಉಸಿರನ್ನು ಬಿಟ್ಟು ಕೈಗಳನ್ನು ಸೊಂಟದ ಅಕ್ಕಪಕ್ಕಗಳಲ್ಲಿ ನೆಲದ ಮೇಲೂರಿ ಒಂದೆರಡು ಬಾರಿ ರೇಚಕ ಪೂರಕಗಳನ್ನು ಮಾಡಿ, ಕಾಲುಗಳನ್ನು ಮಡಿಸಿಕೊಂಡು ಕೈಗಳ ಬಲದಿಂದ ಶರೀರ ಭೂಮಿಗೆ ತಗಲದಂತೆ, ಉಸಿರನ್ನು ತೆಗೆದುಕೊಳ್ಳುತ್ತ ಮೇಲೆತ್ತುವುದು ಹನ್ನೊಂದನೆಯ ವಿನ್ಯಾಸ; ಕಾಲುಗಳನ್ನು ಹಿಂಬದಿಗೆ ಬೀಸಿನೀಡಿ ನಾಲ್ಕನೆಯ ವಿನ್ಯಾಸದ ಕ್ರಮದಲ್ಲಿ ಹೇಳಿರುವಂತೆ ದಂಡಾಕಾರವಾಗಿ ಮಲಗಿ, ಕೈಗಳು ಮತ್ತು ಕಾಲುಗಳಲ್ಲಿ ಮಾತ್ರ ದೇಹವನ್ನು ದಂಡಾಕಾರವಾಗಿ ನಿಲ್ಲಿಸುವುದು ಹನ್ನೆರಡನೆಯ ವಿನ್ಯಾಸ. ಹದಿಮೂರನೆಯ ವಿನ್ಯಾಸ ಮೇಲೆ ಹೇಳಿದ ಐದನೆಯ ವಿನ್ಯಾಸದಂತೆ ಎದೆಯನ್ನೂ ಸೊಂಟವನ್ನು ಬಗ್ಗಿಸಿ ಎದೆಯನ್ನೂ ತಲೆಯನ್ನೂ ಮೇಲೆತ್ತಿ ಉಸಿರನ್ನು ತೆಗೆದುಕೊಳ್ಳುವುದು. ಆರನೆಯ ವಿನ್ಯಾಸದಲ್ಲಿ ಹೇಳಿರುವಂತೆ ರೇಚಕಮಾಡುತ್ತ ಬಂದು ನಿಲ್ಲುವುದು ಹದಿನಾಲ್ಕನೆಯ ವಿನ್ಯಾಸ. ಹದಿನೈದನೆಯ ವಿನ್ಯಾಸ ಮೂರನೆಯ ವಿನ್ಯಾಸದ ಕ್ರಮದಂತೆಯೂ ಹದಿನಾರನೆಯ ವಿನ್ಯಾಸ ಎರಡನೆಯ ವಿನ್ಯಾಸದ ಕ್ರಮದಂತೆಯೂ ಮಾಡಬೇಕು. ಅನಂತರ ಆಸನಕ್ಕೂ ರೇಚಕ, ಪೂರಕ, ವಿನ್ಯಾಸಕ್ರಮಗಳು ಅತ್ಯವಶ್ಯಕ. ಈ ಪಶ್ಚಿಮತಾನಾಸನ ಪೂರ್ಣವಾಗಬೇಕಾದರೆ ಅಥವಾ ಪಶ್ಚಿಮತಾನಾಸನದ ಪೂರ್ಣಫಲ ಲಭಿಸಬೇಕಾದರೆ ಈ ಆಸನಕ್ಕೆ ವ್ಯತಿರಿಕ್ತವಾದ ಮತ್ತೊಂದು ಆಸನವನ್ನು ಮಾಡಬೇಕು. ಏಕೆಂದರೆ, ಮುಂಬದಿಯಲ್ಲಿ ಬಗ್ಗಿ ಒಂದಾಸನವನ್ನು ಮಾಡಿದರೆ ಅದಕ್ಕೆ ವ್ಯತಿರಿಕ್ತವಾದ ಹಿಂಬದಿಗೆ ಬಗ್ಗುವ ಮತ್ತೊಂದಾಸನವನ್ನು ಕೂಡಲೆ ಮಾಡಬೇಕು. ಹಿಂಬದಿಗೆ ಬಗ್ಗಿ ಮಾಡುವ ಆಸನವನ್ನು ಮಾಡಿದರೆ ಕೂಡಲೇ ಮುಂಬದಿಗೆ ಬಗ್ಗಿ ಮಾಡುವ ಆಸನವನ್ನು ಮಾಡಬೇಕು. ಹಾಗೆ ಮಾಡದಿದ್ದಲ್ಲಿ ಸೊಂಟದಲ್ಲಿ ನೋವು ಬಂದು ಅದು ಹಾಗೆಯೇ ಉಳಿದು ಸೂಕ್ಷ್ಮವಾದ ನಾಡಿಗಳ ಮೇಲೆ ಪರಿಣಾಮವಾಗಿ ರೋಗಗ್ರಸ್ಥವಾಗಬಹುದು. ಸೊಂಟವನ್ನು ಹಿಂದೆ ಮುಂದೆ ಬಗ್ಗಿಸಿ ಬಲಪಡಿಸಬೇಕು.

ಪಶ್ಚಿಮತಾನಾಸನಕ್ಕೆ ವ್ಯತಿರಿಕ್ತವಾದದ್ದು ಪೂರ್ವತಾನಾಸನ. ಇದಕ್ಕೆ ಹದಿನೈದು ವಿನ್ಯಾಸಗಳು.  ಎಂಟನೆಯ ವಿನ್ಯಾಸವೇ ಆಸನದ ಸ್ಥಿತಿ. ಪಶ್ಚಿಮತಾನಸನದಲ್ಲಿ ಹೇಳಿರುವ ಕ್ರಮದಂತೆ ವಿನ್ಯಾಸಗಳನ್ನು ಪ್ರಾರಂಭಿಸಿ, ಏಳನೆಯ ವಿನ್ಯಾಸದಲ್ಲಿ ಪಶ್ಚಿಮತಾನಾಸನದಂತೆ ಕಾಲುಗಳನ್ನು ನೆಟ್ಟಗೆ ನೀಡಿ ಕುಳಿತು, ಕೈಗಳನ್ನು ತನ್ನ ವೃಷ್ಠದ ಹಿಂಭಾಗದಲ್ಲಿ ಅರ್ಧ ಅಡಿಯಷ್ಟು ದೂರವಾಗಿರಿಸಿ, ಕೈಗಳ ಬಲದಿಂದ ಉಸಿರನ್ನು ತೆಗೆದುಕೊಳ್ಳುತ್ತ ಸೊಂಟವನ್ನು ಮೇಲೆತ್ತಿ ಬಿಗಿಯಾಗಿ ಶರೀರವನ್ನು ಹಿಡಿದು ತಲೆಯನ್ನು ಹಿಂದೆ ಬಗ್ಗಿಸಿ ಮುಂದಿನ ಪಾದಗಳನ್ನು ಭೂಮಿಯ ಮೇಲೂರಿ, ಸಾಧ್ಯವಾದಷ್ಟು ರೇಚಕ ಪೂರಕಗಳನ್ನು ದೀರ್ಘವಾಗಿ, ಬಿಗಿಯಾಗಿ ಮಾಡುತ್ತ ನಿಲ್ಲುವುದು ಎಂಟನೆಯ ವಿನ್ಯಾಸ. ಈ ಆಸನದ ಸ್ಥಿತಿಯಲ್ಲಿ ಹೊಟ್ಟೆಯನ್ನು ಅಕ್ಕಳಿಸಿ, ಕಿಬ್ಬೊಟ್ಟೆಯನ್ನು ಬಿಗಿಹಿಡಿದು ರೇಚಕ, ಪೂರಕಗಳನ್ನು ಮಾಡುವುದು ಆಸನದ ಸ್ಥಿತಿ. ಉಸಿರನ್ನು ನಿಧಾನವಾಗಿ ಬಿಡುತ್ತ ಏಳನೆಯ ವಿನ್ಯಾಸಕ್ಕೆ ಬಂದು ಕುಳಿತುಕೊಳ್ಳುವುದು ಒಂಭತ್ತನೆಯ ವಿನ್ಯಾಸ. ಪಶ್ಚಿಮತಾನಾಸನದಲ್ಲಿ ಹೇಳಿರುವಂತೆ ಕಾಲುಗಳನ್ನು ಮಡಿಸಿ, ಕೈಗಳ ಬಲದಿಂದ ಶರೀರವನ್ನು ಉಸಿರು ತೆಗೆದುಕೊಳ್ಳುತ್ತ ಮೇಲೆತ್ತುವುದು ಹತ್ತನೆಯ ವಿನ್ಯಾಸ. ಮುಂದಿನ ವಿನ್ಯಾಸಗಳು ಮತ್ತು ರೇಚಕ, ಪೂರಕಗಳನ್ನು ಪಶ್ಚಿಮತಾನಾಸನದಂತೆಯೇ ಗ್ರಹಿಸಬೇಕು. 

ಪಶ್ಚಿಮತಾನಾಸನ ಮತ್ತು ಪೂರ್ವತಾನಾಸನಗಳನ್ನು ಅಭ್ಯಾಸ ಮಾಡುವಾಗ ರೇಚಕ ಮತ್ತು ಪೂರಕಗಳು ಮೂಗಿನಿಂದ ಆಗಬೇಕು ಮತ್ತು ಆಸನಗಳನ್ನು ಅಭ್ಯಾಸ ಮಾಡುವಾಗ ಅವು ಬಂಧಗಳೆಡೆಗೆ ಗಮನಕೊಡಬೇಕು. ಬಂಧಗಳೆಂದರೆ ಶ್ವಾಸವನ್ನು ಕಟ್ಟುವುದು. ಅಂದರೆ, ರೇಚಕಪೂರಕಗಳ ಗಮನ ಕೊಡಬೇಕು. ಬಂಧಗಳೆಂದರೆ ಶ್ವಾಸಕೋಶದಲ್ಲಿ ಗಾಳಿಯನ್ನು ನಿಲ್ಲಿಸಬೇಕಾದರೆ ಈ ಬಂಧಗಳು ಅತ್ಯವಶ್ಯಕ. ಗಾಳಿ ಒಂದೆಡೆಯಲ್ಲಿ ನಿಲ್ಲುವುದು ಅಸಂಭವ. ಶರೀರದಲ್ಲಿ ಗಾಳಿಯನ್ನು ಅಂದರೆ ಉಚ್ಛ್ವಾಸ ನಿಶ್ವಾಸಗಳನ್ನು ತಡೆದು ನಿಲ್ಲಿಸಬೇಕಾದರೆ ಶರೀರದ ನವದ್ವಾರಗಳನ್ನು ಬಂಧಿಸಬೇಕು. ಹಾಗಾದರೆ ನಾವು ತೆಗೆದುಕೊಂಡ ಗಾಳಿಯಿಂದ ಸಾಧಿಸಬೇಕಾದ ವಿಷಯ ಸುಲಭವಾಗಿ ಕೈಗೂಡುವುದು. ಇಲ್ಲವಾದಲ್ಲಿ ನಮ್ಮ ಪ್ರಯತ್ನ ವ್ಯರ್ಥವಾಗುವುದು. ಆದಕಾರಣ ಬಂಧಗಳ ಕ್ರಮಗಳನ್ನು ಮೊದಲು ತಿಳಿಯಬೇಕು. ಬಂಧಗಳಲ್ಲಿ ಮೂರು ವಿಧ-ಜಾಲಂಧರ ಬಂಧ, ಉಡ್ಯಾಣಬಂಧ, ಮೂಲಬಂಧ, ಇವುಗಳನ್ನು ಕ್ರಮವಾಗಿ ಹೃದಯ, ಕಿಬ್ಬೊಟ್ಟೆ ಮತ್ತು ಗುದಸ್ಥಾನಗಳಲ್ಲೆಂದು ಹೇಳುತ್ತಾರೆ. ಆಸನಗಳನ್ನು ಅಭ್ಯಾಸ ಮಾಡುವಾಗ ಪೂರ್ಣವಾಗಿ ಅನೇಕ ರೇಚಕ ಮಾಡಿದ ಅನಂತರ ಗುದವನ್ನು ಅಕುಂಚನಮಾಡಿ, ಬಿಗಿ ಹಿಡಿಯುವುದು, `ಮೂಲಬಂಧ ಮತ್ತು ಹೊಟ್ಟೆಯನ್ನು ಅಕ್ಕಳಿಸಿ ಉಸಿರನ್ನು ತೆಗೆದುಕೊಳ್ಳುವುದಕ್ಕೆ ಮೊದಲು ಬಿಗಿಹಿಡಿಯುವುದು `ಉಡ್ಯಾಣಬಂಧ. ಈ ಎರಡು ಬಂಧಗಳನ್ನೂ ಉಸಿರನ್ನು ಸಂಪೂರ್ಣವಾಗಿ ಬಿಟ್ಟಿರುವಾಗಲೇ ಅಭ್ಯಾಸ ಮಾಡಬೇಕು. ರೇಚಕ ಪೂರಕಗಳನ್ನು ಮಾಡುವಾಗಲೂ ಈ ಎರಡು ಬಂಧಗಳು ಇದ್ದೇ ಇರಬೇಕು. ಅನಂತರ ಉಸಿರನ್ನು ತೆಗೆದುಕೊಂಡು ಗದ್ದವನ್ನು ಕಂಠರೂಪದ ಕೆಳಭಾಗದಲ್ಲಿ ಬಿಗಿಯಾಗಿ ಒತ್ತಿ ಹಿಡಿಯುವುದು ಜಾಲಂಧರಬಂಧ. ಈ ಬಂಧ ಪ್ರಾಣಾಯಾಮದಲ್ಲಿ ಉಪಯುಕ್ತವಾಗುತ್ತದೆ. ಪ್ರತಿಯೊಂದು ಆಸನವನ್ನು ಮಾಡುವಾಗಲೂ ಮೊದಲನೆಯ ಎರಡು ಬಂಧಗಳೂ ಇರಲೇಬೇಕು.  ಈ ಬಂಧಗಳ ಕಡೆಗೆ ಗಮನವೀಯದೆ ಕೇವಲ ಆಸನಗಳನ್ನು ಮಾಡಿದರೆ ಸಾಧಕ ರೋಗಗ್ರಸ್ತನಾಗಬಹುದು ಅಥವಾ ಬೌದ್ಧಿಕ ಬೆಳವಣಿಗೆ ಬಾರದೆ ಬುದ್ಧಿಮಾಂದ್ಯಾದಿಗಳು, ಬುದ್ಧಿಭ್ರಮಣೆ ಇತ್ಯಾದಿಗಳು ಉಂಟಾಗುವ ಸಂಭವವಿರುತ್ತದೆ. ಹೀಗೆ ಪಶ್ಚಿಮಾತಾನಾಸನವನ್ನು ಸವಿನ್ಯಾಸದೊಂದಿಗೆ ರೇಚಕ, ಪೂರಕ, ಬಂಧ ಇವುಗಳ ಸಹಿತ ಅಭ್ಯಾಸ ಮಾಡಿದರೆ ಹೊಟ್ಟೆಯಲ್ಲಿ ಸೇರಿರುವ ಕೊಬ್ಬು ಕರಗಿ ಹೊಟ್ಟೆ ತೆಳ್ಳಗಾಗಿ ಜಠರಾಗ್ನಿಯನ್ನು ವೃದ್ಧಿಪಡಿಸಿ ಆಹಾರಾದಿಗಳು ಚೆನ್ನಾಗಿ ಪಚನವಾಗುವಂತೆ ಜೀರ್ಣಾಂಗ ಕೋಶಗಳನ್ನು ಬಲಪಡಿಸುತ್ತದೆ. ಉದರಕ್ಕೆ ಸಂಬಂಧಪಟ್ಟ ಹೊಟ್ಟೆಯ ನೋವು, ಹೊಟ್ಟೆಯ ಕೂಗು, ಅಗ್ನಿಮಾಂದ್ಯದಿಂದ ಆಹಾರಾದಿಗಳು ಜೀರ್ಣವಾಗದಿರುವಿಕೆ, ಕೈಕಾಲುಗಳು ಸೋಲುವುದು, ಪಿತ್ತವಿಕಾರದಿಂದ ತಲೆಸುತ್ತಿಬೀಳುವುದು, ಮುಂತಾದ ಎಲ್ಲ ರೋಗಗಳೂ ಗುಣಹೊಂದುತ್ತವೆ. ಗುದಸ್ಥಾನದಲ್ಲಿ ಸಂಚರಿಸುವ ಅಪಾನವಾಯು ಅಧೋಗತಿಗೆ ಮೇಲ್ಮುಖವಾಗಿ ಪ್ರಾಣವಾಯುವಿನೊಡನೆ ಸೇರುವುದು. ಆಗ ಸಾಧಕನಿಗೆ ಜರಾಮೃತ್ಯುವಿನ ಭಯವಿರಲಾರದು.

	ಪ್ರತಿಯೊಂದು ಆಸನಕ್ಕೂ ವಿನ್ಯಾಸಗಳ ಕ್ರಮ, ರೇಚಕ ಮತ್ತು ಪೂರಕ ಇವುಗಳ ಗತಿ ಮತ್ತು ಫಲ ಇರುತ್ತವೆ. ಅನೇಕ ವ್ಯಾಪ್ಯರೋಗಗಳನ್ನು ವೈದ್ಯರಿಂದ ಪೂರ್ಣಗುಣಪಡಿಸಲು ಸಾಧ್ಯವಾಗಲಾರದು. ಉದಾಹರಣೆಗೆ ಸಿಹಿಮೂತ್ರರೋಗ, ಆಸ್ತಮಾ (ಕಫರೋಗ) , ಹೊಟ್ಟೆಯಲ್ಲಿ ಒಂದು ವಿಧವಾದ ವಾಯು ಉತ್ಪತ್ತಿಯಾಗುವುದು ಇತ್ಯಾದಿ ರೋಗಗಳು ಯೋಗಾಸನ ಮತ್ತು ಪ್ರಾಣಾಯಾಮಗಳಿಂದ ಸುಲಭವಾಗಿ ಪೂರ್ಣವಾಗಿ ಗುಣಹೊಂದುತ್ತವೆ. ಯೋಗ್ಯವಿದ್ಯೆಯ ರಸಹ್ಯವನ್ನು ಚೆನ್ನಾಗಿ ತಿಳಿದ ಗುರುವಿನಲ್ಲಿಯೇ ಕಲಿಯಬೇಕು. ಸಾಮಾನ್ಯವಾಗಿ ಯಾವ ರೋಗಗಳಿಗೆ ಯಾವ ಆಸನಗಳನ್ನು ಹೇಳಿರುತ್ತದೆ ಎಂಬುದನ್ನು ಯೋಗಮಾಲಾ, ಯೋಗ ಮಕರಂದ ಮತ್ತು ಯೋಗಾಸನಗಳ ಬಗೆಗಿನ ಇನ್ನಿತರ ಗ್ರಂಥಗಳಲ್ಲಿ ನೋಡಬಹುದು. ಅವುಗಳಲ್ಲಿ ಸವಿಸ್ತಾರವಾಗಿ ಆಬಾಲವೃದ್ಧರಿಗೂ ಉಪಯೋಗವಾಗುವಂತೆ ಯಾವ ವಯಸ್ಸಿನವರಿಗೆ ಯಾವ ಆಸನಗಳು ಉಪಯುಕ್ತವಾಗುತ್ತವೆ, ಯಾವ ವಯಸ್ಸಿನವರು ಎಷ್ಟು ಆಸನಗಳನ್ನು ಮಾಡಿದರೆ ನಿತ್ಯವೂ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬ ವಿಚಾರವನ್ನು ಯೋಗಮಾಲಾದ ಚಿಕಿತ್ಸಾ ವಿಭಾಗವನ್ನು ನೋಡಿದರೆ ಗೊತ್ತಾಗುತ್ತದೆ. ಗುರುವಿಲ್ಲದೆ ಪುಸ್ತಕ, ಪ್ರತಿಬಿಂಬಗಳನ್ನು ನೋಡಿ ಯೋಗಾಸನಗಳನ್ನು ಖಂಡಿತ ಮಾಡಕೂಡದು.

(ಕೆ.ಪಿ.ಜೆ.; ಎಚ್.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ